ನರಸಿಂಹಶಾಸ್ತ್ರಿ, ದೇವುಡು
1897-1962. ಕನ್ನಡ ನವೋದಯ ಶ್ರಾಯದ ಪ್ರಮುಖ ಸಾಹಿತಿ. ಅಂದಿನ ಸಾಂಸ್ಕøತಿಕ ರಂಗದ ಒಬ್ಬ ದೊಡ್ಡ ಸಂಭಾವಿತ. ಹುಟ್ಟಿದ್ದು ಸಂಪ್ರದಾಯ ಸಂಸ್ಕøತಿಗಳ ಪರಿಸರವಿದ್ದ ಆಸ್ಥಾನ ಪಂಡಿತರ ರಾಜಪುರೋಹಿತರ ವಂಶದಲ್ಲಿ, ಮೈಸೂರಿನಲ್ಲಿ. ಬಾಲ್ಯದಿಂದಲೂ ಬುದ್ಧಿ, ಚುರುಕುತನಗಳಿಂದ ಎಲ್ಲರನ್ನೂ ಆಕರ್ಷಿಸಿದ್ದ ಇವರು ವೈದಿಕ ವಿದ್ಯೆಯಿಂದ ಹೊರಬಂದು ಎಂ.ಎ. ಮಾಡಿದರು. ದರ್ಶನಗಳೇ ನೆಚ್ಚಿನ ವಿಷಯಗಳಾಗಿದ್ದ ಇವರಿಗೆ ರಾಧಾಕೃಷ್ಣನ್ ಅವರು ಕಾಲೇಜಿನಲ್ಲಿ ಅಧ್ಯಾಪಕರು. ವಿದ್ಯಾಭ್ಯಾಸದ ಅನಂತರ ಮೈಸೂರಿನ ಒಂದು ಶಾಲೆಯಲ್ಲಿ ಇವರು ಮುಖ್ಯೋಪಾಧ್ಯಾಯರಾಗಿದ್ದರು.

ಕೆಲಕಾಲಾನಂತರ ದೇವುಡು ಬೆಂಗಳೂರಿಗೆ ಬಂದು, ಆರ್ಯವಿದ್ಯಾಶಾಲೆಗೆ ಮುಖ್ಯೋಪಾಧ್ಯಾಯರಾಗಿ, ಶಾಸ್ತ್ರೋಕ್ತವಾಗಿ ನಿಷ್ಠೆಯಿಂದ ವೇದಾಂತ, ಪೂರ್ವ ಮೀಮಾಂಸಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಮೊದಲೇ ಸಂಸ್ಕøತದ ಕ್ರಮಬದ್ಧ ಪರಿಚಯವಿದ್ದ ಇವರಿಗೆ ಇದು ಅದರಲ್ಲಿ ಪ್ರಕಾಂಡ ಪಾಂಡಿತ್ಯವನ್ನೂ ಆಳವಾದ ಪರಿಣತಿಯನ್ನೂ ಮೆರೆಯಲು ಅವಕಾಶ ಮಾಡಿಕೊಟ್ಟಿತು. ಈ ನೈಷ್ಠಿಕ ಅಧ್ಯಯನ ಹಾಗೂ ಅತ್ಯಪೂರ್ವ ವೈಚಾರಿಕ ಚಿಂತನಗಳಿಂದಲೇ ಇವರು `ಮೀಮಾಂಸಾದರ್ಪಣ ಎಂಬ ಕೃತಿಯನ್ನು ರಚಿಸಿದ್ದು. ಸಂಸ್ಕøತದ ಬಗ್ಗೆ ಮೋಹ ವಿಶ್ವಾಸಗಳಿದ್ದ ಇವರಿಗೆ ಹಲವು ಜನ ಸಂಸ್ಕøತವನ್ನು ಕಲಿಯಬೇಕು ಎಂದಾಸೆಯಿತ್ತಂತೆ. ಇದನ್ನು ಗಮನದಲ್ಲಿಟ್ಟುಕೊಂಡೇ `ಮೂಲಸಂಸ್ಕøತ ಎಂಬ ಕೃತಿಯನ್ನೂ ರಚಿಸಿದ್ದರು. ಇವರು ಅಖಿಲಭಾರತ ಸಂಸ್ಕøತ ಸಮ್ಮೇಳನದಲ್ಲಿ ಮೈಸೂರಿನ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದೂ ಉಂಟು.

ಶಾಸ್ತ್ರಿಗಳ ಆಸಕ್ತಿ ಹಲವಾರು ಕ್ಷೇತ್ರಗಳನ್ನು ಒಳಗೊಂಡಿತ್ತಾದರೂ ಪತ್ರಿಕಾ ವೃತ್ತಿಯಲ್ಲಿ ಅವರಿಗೆ ಅಪಾರ ಲೋಲುಪ್ತಿ. ಆ ವೃತ್ತಿಗೆ ಮೈಸೂರಿನಲ್ಲಿ ಅವಕಾಶವಿರದಿದ್ದರಿಂದಲೇ ಇವರು ಮೈಸೂರನ್ನು ಬಿಟ್ಟರು ಎಂದೂ ಕೆಲವರು ಹೇಳಿರುವುದುಂಟು. ಆರ್ಯವಿದ್ಯಾಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾಗ, ತುಂಬ ಆಕರ್ಷಕ ರೀತಿಯಲ್ಲಿ ಹೊರಬರುತ್ತಿದ್ದ ನವಜೀವನ ಎಂಬ ವಾರ ಹಾಗೂ ದೈನಂದಿನ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್‍ಗೆ ಸದಸ್ಯರಾಗಿದ್ದಾಗ ಆ ಸಂಸ್ಥೆಯ ವತಿಯಿಂದ ಹೊರಬರುತ್ತಿದ್ದ ರಂಗಭೂಮಿ ಪತ್ರಿಕೆಯ ಮೂಲ ನೇತಾರರಾಗಿದ್ದರು. ಆ ಪತ್ರಿಕೆಯನ್ನು ವೇದಿಕೆಯಾಗಿರಿಸಿಕೊಂಡು ಅಂದು ನಶಿಸಿ ನರಳುತ್ತಿದ್ದ ನಾಟಕಕಲೆ, ಶಾಸ್ತ್ರ್ರಗಳ ಬಗ್ಗೆ ಹಲವು ವಿಚಾರಪ್ರದ ಲೇಖನಗಳನ್ನು ಬರೆದು ನಾಟಕಕಲೆಯ ಬೆಳವಣಿಗೆಗೆ ಅಪಾರ ಶ್ರಮವಹಿಸಿದರು. ಇವರು ಎಂಥ ಅಪರೂಪದ ವ್ಯಕ್ತಿಯೆಂದರೆ ಮಕ್ಕಳ ಸಾಹಿತ್ಯಕ್ಕೆಂದೇ ಆ ಕಾಲದಲ್ಲಿ `ನಮ್ಮ ಪುಸ್ತಕ ಎಂಬ ಒಂದು ಶಿಶುಮಾಸಪತ್ರಿಕೆಯನ್ನು ಹೊರಡಿಸಿದ್ದುಂಟು. ಅಷ್ಟೇ ಅಲ್ಲ, ಭಗವದ್ಗೀತೆ ಎಲ್ಲರಿಗೂ ಪರಿಚಯವಾಗಬೇಕೆಂಬ ದೃಷ್ಟಿಯಿಂದ ಒಂದು ಪತ್ರಿಕೆಯನ್ನು ತುಂಬ ಕಷ್ಟಪಟ್ಟು ನಡೆಸುತ್ತಿದ್ದರಂತೆ. ಒಟ್ಟಿನಲ್ಲಿ ಕನ್ನಡಪತ್ರಿಕಾರಂಗದಲ್ಲಿ ಇವರದು ಅಳಿಸಲಾಗದ ಹೆಜ್ಜೆಗುರುತು ; ಮರೆಯಲಾಗದ ಹೆಸರು.

ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಇವರದು ಗಮನೀಯವೂ ಬೆಲೆಯುಳ್ಳದ್ದೂ ಆದ ಕಾಣಿಕೆಯಾಗಿದೆ. ಸಾಂಸ್ಕøತಿಕ ಹಿನ್ನೆಲೆಯನ್ನು ಬೆನ್ನೆಲುಬಾಗಿಸಿಕೊಂಡು ಅತ್ಯಂತ ಹಿರಿದಾದ ಜೀವನದೃಷ್ಟಿಯಿಂದ ಇವರು ರಚಿಸಿರುವ `ಮಹಾಬ್ರಾಹ್ಮಣ, `ಮಹಾಕ್ಷತ್ರಿಯ ಮತ್ತು `ಮಹಾದರ್ಶನ ಕೃತಿಗಳು ಉಜ್ವಲ ರಚನೆಗಳಾಗಿವೆ. ಈ ಮೂರೂ ಕೃತಿಗಳಲ್ಲಿ ಅನುಕ್ರಮವಾಗಿ ವಿಶ್ವಾಮಿತ್ರ, ನಹುಷ ಮತ್ತು ಯಾಜ್ಞವಲ್ಕ್ಯದ ಬದುಕನ್ನು ಕಥೆಯಾಗಿ ಮಾರ್ಪಡಿಸಿ ಆಕರ್ಷಕವಾಗಿ ನಿರೂಪಿಸಿದ್ದಾರೆ. ಇವುಗಳಲ್ಲಿ ಪೌರಾಣಿಕ ಪ್ರಪಂಚ ನಮ್ಮ ಕಣ್ಣಮುಂದೆ ನೈಜವಾಗಿ ಬಂದು ನಿಲ್ಲುತ್ತದೆ. ವೈದಿಕ ಸಾಹಿತ್ಯದಲ್ಲಿ ಇವರು ಪಡೆದಿದ್ದ ಪರಿಣತಿಗೆ ಇವು ಉತ್ತಮ ಉದಾಹರಣೆಗಳಾಗಿವೆ. ಈ ವಿಸ್ಮಯಾದ್ಭುತ ವ್ಯಕ್ತಿಗಳ ವ್ಯಕ್ತಿತ್ವ ಕೃತಿಕಾರನ ಪ್ರತಿಭೆ ಪಾಂಡಿತ್ಯಗಳ ಸಾಮರಸ್ಯದಲ್ಲಿ ಸೊಗಸಾಗಿ ಚಿತ್ರಿತವಾಗಿದೆ ; ಆ ಕಾಲದ ಜನರ ನಡೆವಳಿಕೆ ಜೀವನಕ್ರಮ ಸಹಜವಾಗಿ ರೇಖಿತವಾಗಿದೆ. ಇವರ `ಮಹಾಕ್ಷತ್ರಿಯ ಕಾದಂಬರಿಗೆ 1962ರಲ್ಲಿ ಅಂದರೆ ಇವರು ಮರಣಹೊಂದಿದ ಅನಂತರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ದೇವುಡು ಸಾಮಾಜಿಕ ಕಾದಂಬರಿಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಅಂತರಂಗ, ಮಲ್ಲಿ, ಎರಡನೆಯ ಜನ್ಮ, ಡಾ. ವೀಣಾ ಇವು ಗಮನಾರ್ಹವಾದವು. ಇವುಗಳಲ್ಲಿ ಮನದ ತಳಮಳ ತುಮುಲಗಳನ್ನು ಚಿತ್ರಿಸುವ ಪ್ರಯತ್ನವಿದೆ. ಕಾಮಜೀವನದ ಸಮಸ್ಯೆ ಕೂಡ ಇವುಗಳಲ್ಲಿ ನಿರೂಪಿತವಾಗಿದೆ. ಇವರ ಕಳ್ಳರ ಕೂಟ ಕಾದಂಬರಿ ಗಯಟೆಯ ಫೆಲೊ ಕಲ್‍ಪ್ರಿಟ್ಸ್ ನಾಟಕವನ್ನು ಅವಲಂಬಿಸಿ ರಚಿತವಾಗಿದೆ. ಕದಂಬ-ಪಲ್ಲವರ ವೈಷಮ್ಯವನ್ನೊಳಗೊಂಡ ಮಯೂರವೆಂಬ ಇವರ ಐತಿಹಾಸಿಕ ಕಾದಂಬರಿ ಕುತೂಹಲ ರೋಮಾಂಚನಗಳಿಂದೊಡಗೂಡಿ ಇಂದಿಗೂ ಜನಪ್ರಿಯವಾಗಿದೆ. ಸಾವಿತ್ರಿ ಎಂಬ ನಾಟಕವನ್ನೂ ವೈಣಿಕ ಎಂಬ ಸಣ್ಣಕಥಾ ಸಂಕಲನವನ್ನೂ ಸೋಲೋ ಗೆಲುವೋ ಎಂಬ ನೀಳ್ಗತೆಗಳನ್ನೂ ಇವರು ಪ್ರಕಟಿಸಿದ್ದಾರೆ.

ಶಾಸ್ತ್ರಿಗಳಿಗೆ ಕನ್ನಡದ ಆದ್ಯ ಜಾನಪದ ತಜ್ಞರಲ್ಲಿ ಹಿರಿಯ ಸ್ಥಾನವಿದೆ. ಇವರ ಕರ್ಣಾಟಕ ಸಂಸ್ಕøತಿ ಈ ದೃಷ್ಟಿಯಿಂದ ಅತ್ಯಂತ ಪ್ರಮುಖ ಪುಸ್ತಕವಾಗಿದೆ. ಇವರ ಸಂಶೋಧನಶೀಲ ಪ್ರವೃತಿ ಇಲ್ಲಿ ಮಡುಗಟ್ಟಿದೆ. ಇವರು ಉತ್ತಮ ಅನುವಾದಕರೂ ಸಂಗ್ರಾಹಕರೂ ಹೌದು. ವಿವೇಕಾನಂದರ ಭಾಷಣಗಳನ್ನೂ ಜಾನ್ ಮೇಸ್‍ಫೀಲ್ಡ್‍ನ ದಿ ಟ್ರಯಲ್ ಆಫ್ ಜೀಸಸ್ ನಾಟಕವನ್ನೂ ಚೆನ್ನಾಗಿ ಕನ್ನಡೀಕರಿಸಿದ್ದಾರೆ. ಕಾಳಿದಾಸನ ಕೃತಿಗಳ ವಸ್ತುವನ್ನು ಕನ್ನಡದಲ್ಲಿ ಸಂಗ್ರಹಿಸಿದ್ದಾರೆ. ಭಾರತದ ಮಹಾಪುರುಷರು ಹಾಗೂ ಸಂಗ್ರಹ ರಾಮಾಯಣ ಎಂಬುವು ಭಾರತೀಯ ಮಹಾಕಾವ್ಯಗಳ ಬಗೆಗಿನ ಇವರ ಒಲವನ್ನು ತೋರಿಸುವುವಾಗಿದೆ.

ಇವರದ್ದು ಪ್ರಪುಲ್ಲವೂ ಧೀರವೂ ಧೀಮಂತವೂ ಆದ ವ್ಯಕ್ತಿತ್ವ. ಇವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದಲ್ಲದೆ, ಮಾರ್ಕಂಡೇಯ, ಚಿರಂಜೀವಿ ಎಂಬ ಚಲನಚಿತ್ರಗಳಲ್ಲೂ ನಟಿಸಿದ್ದರಂತೆ. ಸಂಗೀತದಲ್ಲಿ ಆಸಕ್ತಿ ಹೊಂದಿದ್ದು ವೀಣೆಯನ್ನು ಅಭ್ಯಾಸ ಮಾಡಿದ್ದರಂತೆ. ಮೊದಲಿನಿಂದಲೂ ಇವರು ಮೇಲ್ದರ್ಜೆಯ ಧೋರಣೆಯವರೂ ಹೌದು. ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ನೀವು ಯಾರು ನಿಮ್ಮ ಕೆಲಸವೇನು ಎಂದು ಪ್ರಶ್ನಿಸಲು ಸಿಂಹಾಸನವನ್ನು ಹತ್ತುವ ಮೊದಲು ಮಹಾರಾಜರು ನಮಗೆ ನಮಸ್ಕರಿಸಿ ಆಶೀರ್ವಾದ ಪಡೆಯುವವರು! ಎಂದರಂತೆ. ಇದೇ ಗತ್ತು ಠೀವಿಗಳು ಆರ್ಷೇಯ ಭಾವನೆಗಳಿದ್ದ ವ್ಯಕ್ತಿ ಒಮ್ಮೆ ಉತ್ತಂಗಿ ಚನ್ನಪ್ಪನವರಲ್ಲಿ ಯೇಸುವಿನ ಪ್ರತಿರೂಪ ಕಂಡು ಅವರ ಪಾದಗಳನ್ನು ತೊಳೆದರಂತೆ. ಮತ್ತೊಮ್ಮೆ ಬೆಂಗಳೂರಿನ ಸುಲ್ತಾನ್ ಪೇಟೆಯ ಗಲಭೆಯೊಂದರಲ್ಲಿ ಹಣ್ಣುಮುದುಕನೊಬ್ಬ ಗೋಲಿ ತಾಕಿ ಕುಸಿದಾಗ, ನೆರೆದ ಜನಜಂಗುಳಿ ಭೀತಿಯಿಂದ ಕಂಪಿಸುತ್ತಿದ್ದಾಗ ಆತನನ್ನು ರಕ್ಷಿಸಿ ಉಪಚರಿಸಿದರಂತೆ, ಇವರ ಜೀವನದ ಇಂಥ ಕೆಲವು ಘಟನೆಗಳು ಇವರು ಸಾಮಾಜಿಕ ಹಾಗೂ ಸಾಂಸ್ಕøತಿಕ ರಂಗಗಳಲ್ಲಿ ತುಂಬ ಎತ್ತರದ ವ್ಯಕ್ತಿಯಾಗಿದ್ದರು ಎಂಬುದನ್ನು ತಿಳಿಯಪಡಿಸುತ್ತದೆ. ಮೇಲ್ಮಟ್ಟದ ಭಾಷಣಕಾರರೂ ದಾರ್ಶನಿಕರೂ ಆಗಿದ್ದ ಇವರ ಸಾಹಿತ್ಯಿಕ ಕೃತಿಗಳು ಭಿನ್ನ ಪೃಥೆಯೊಂದರ ದಿಕ್ಸೂಚಿಯಾಗಿದ್ದು ಅಪೂರ್ವ ಕೊಡುಗೆಯಾಗಿದೆ.  
     (ಟಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ